ಗ್ರಾಮೀಣ ಋಣಗ್ರಸ್ತತೆ

	ಭಾರತೀಯ ರೈತ ಸಾಲದಲ್ಲಿ ಹುಟ್ಟಿ, ಸಾಲದಲ್ಲಿ ಬೆಳೆದು, ಸಾಲದಲ್ಲೇ ಸಾಯುತ್ತಾನೆ ಎನ್ನುವುದು ಪ್ರಸಿದ್ಧವಾದ ನಾಣ್ನುಡಿಯಾಗಿದೆ. ಸಾಲ ಬಡತನಕ್ಕೆ ಅಂಟಿಕೊಂಡು ಬರುವ ವ್ಯಾಧಿ. ಭಾರತೀಯ ರೈತರಲ್ಲಿ ಬಹುಸಂಖ್ಯಾತರು ಬಡವರು. ಇವರು ಸರಾಸರಿ ಸಾಗುವಳಿ ಭೂಮಿಯ ವಿಸ್ತಾರ ಅತ್ಯಲ್ಪ. ಅದರ ಹುಟ್ಟುವಳಿಯಿಂದ ಅಹನ್ಯಹನಿ ಕಾಲಕ್ಷೇಪವಾಗುವುದೂ ಕಷ್ಟ. ವರ್ಷಪೂರ್ತಿ ಹೊಟ್ಟೆ ಹೊರೆಯುವುದರಿಂದ ಹಿಡಿದು ಹಲವಾರು ಕೌಟುಂಬಿಕ ಬಾಧ್ಯತೆಗಳನ್ನು ಪೂರೈಸುವವರೆಗೆ ಅವನು ಸಾಲ ಮಾಡಬೇಕಾಗುತ್ತದೆ. ಇವಲ್ಲದೆ ನಿತ್ಯದ ಸಾಗುವಳಿ ಖರ್ಚು ಬೇರೆ. ಬೀಜ, ಗೊಬ್ಬರ, ಉಪಕರಣ ಇವೆಲ್ಲ ಖರ್ಚಿನ ಬಾಬ್ತುಗಳೇ. ಇವಕ್ಕಾಗಿ ವಿಧಿಯಿಲ್ಲದೆ ಸಾಲಮಾಡಬೇಕಾಗುತ್ತದೆ. ಹೀಗೆ ರೈತರು ವ್ಯವಸಾಯೋದ್ಯಮಕ್ಕೂ ಸಂಸಾರನಿರ್ವಹಣೆಗೂ ಅತಿಯಾಗಿ ಸಾಲ ಮಾಡುವ ಶೋಚನೀಯ ಪರಿಸ್ಥಿತಿಯಿದೆ.

	ಭಾರತದಲ್ಲಿ ರೈತರು ಪ್ರತಿವರ್ಷವೂ ಮಾಡುವ ಸಾಲದ ಪರಿಮಾಣವೆಷ್ಟು ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಆದರೂ ಈ ಬಗ್ಗೆ ಅಂದಾಜು ಮಾಡಲು ಆಗಿಂದಾಗ್ಗೆ ಪ್ರಯತ್ನಗಳು ನಡೆದಿವೆ. 1911ರ ಮ್ಯಾಕ್ಲಗನ್ ಸಮೀಕ್ಷೆಯ ಪ್ರಕಾರ ಆ ವರ್ಷ ರೈತರು ಪಡೆದಿದ್ದ ಸಾಲದ ಒಟ್ಟು ಮೊಬಲಗು ಸುಮಾರು 300 ಕೋಟಿ ರೂಪಾಯಿಗಳಷ್ಟು. 1925ರ ಎಂ.ಎಲ್.ಡಾರ್ಲಿಂಗ್ ಅಂದಾಜಿನ ಪ್ರಕಾರ ರೈತರ ಒಟ್ಟು ಸಾಲದ ಮೊತ್ತ 600 ಕೋಟಿ ರೂಪಾಯಿಗಳು. ಕೇಂದ್ರೀಯ ಬ್ಯಾಂಕಿಂಗ್ ವಿಚಾರಣಾ ಸಮಿತಿ 1929ರಲ್ಲಿ ರೈತರ ಋಣಭಾರ ಒಟ್ಟು 900 ಕೋಟಿ ರೂಪಾಯಿಗಳೆಂದು ಅಂದಾಜು ಮಾಡಿತು. 1937ರಲ್ಲಿ ರಿಸರ್ವ್ ಬ್ಯಾಂಕಿನವರು ನಡೆಸಿದ ಸಮೀಕ್ಷೆಯಂತೆ 1,800 ಕೋಟಿ ರೂಪಾಯಿಗಳು.

	ದ್ವೀತಿಯ ಮಹಾಯುದ್ಧ ಕಾಲದಲ್ಲೂ ಅನಂತರದ ವರ್ಷಗಳಲ್ಲೂ ಆಹಾರಧಾನ್ಯ ಮತ್ತು ಇತರ ವ್ಯವಸಾಯೋತ್ಪನ್ನಗಳ ಬೆಲೆ ಏಕಪ್ರಕಾರವಾಗಿ ಏರುತ್ತ ಬಂದದ್ದರಿಂದ ರೈತರು ಲಾಭ ಗಳಿಸುತ್ತಿದ್ದಾರೆ; ಅವರ ಸಾಲದ ಹೊರೆ ಗಮನೀಯವಾಗಿ ಇಳಿದಿದೆ ಎಂದು ಕೆಲವರ ಅಭಿಪ್ರಾಯ. ಬೆಲೆಯ ಏರಿಕೆಯಿಂದ ಶ್ರೀಮಂತ ಜಮೀನ್ದಾರರಿಗೂ ದಳ್ಳಾಳಿ ವರ್ತಕರಿಗೂ ಫಾಯಿದೆ ಆಗಿದೆಯೇ ಹೊರತು ನಿಜವಾಗಿ ಬಹುಸಂಖ್ಯಾತರಾದ ಬಡರೈತರ ಸ್ಥಿತಿ ಸುಧಾರಿಸಿಲ್ಲವೆಂದೂ ಅವರಿನ್ನೂ ಸಾಲದ ಸುಳಿಯಲ್ಲೇ ಸಿಕ್ಕಿಬಿದ್ದಿದ್ದಾರೆಂದೂ ಮತ್ತೆ ಕೆಲವರ ಮತ. ಈ ಎರಡನೆಯ ವಾದದಲ್ಲಿ ಬಹುಮಟ್ಟಿಗೆ ಸತ್ಯವಿದೆಯೆಂಬುದನ್ನು ಒಪ್ಪಬೇಕು. ರಿಸರ್ವ್ ಬ್ಯಾಂಕಿನ ಅಖಿಲ ಭಾರತ ಗ್ರಾಮೀಣ ಉದ್ದರಿ ಸರ್ವೇಕ್ಷಣ ಸಮಿತಿಯ ಅಂದಾಜಿನ ಪ್ರಕಾರ 1951---1952ರಲ್ಲಿ ಗ್ರಾಮೀಣ ಜನರ ಸಾಲದ ಮೊತ್ತ ಸುಮಾರು 750 ಕೋಟಿ ರೂಪಾಯಿಗಳು. ರಿಸರ್ವ್‍ಬ್ಯಾಂಕ್ 1961--62ರಲ್ಲಿ ನಡೆಸಿದ ಮತ್ತೊಂದು ಸರ್ವೇಕ್ಷಣೆಯ ಪ್ರಕಾರ ಒಟ್ಟು ಗ್ರಾಮೀಣ ಸಾಲ 3,000 ಕೋಟಿ ರೂಪಾಯಿಗಳು. ಅದೇ ವರ್ಷದಲ್ಲಿ 7.4 ಲಕ್ಷ ಗ್ರಾಮೀಣ ಕುಟುಂಬಗಳ ಸರಾಸರಿ ಸಾಲದ ಹೊರೆ 406 ರೂಪಾಯಿಗಳು. ಸೇ.70ರಷ್ಟು ಗ್ರಾಮೀಣ ಕುಟುಂಬಗಳು ಸಾಲದಲ್ಲಿ ಸಿಲುಕಿದ್ದುವು.

	ಜನರು ಯಾವುದೇ ಉದ್ಯಮದಲ್ಲಿ ತೊಡಗಿರಲಿ, ಆ ಉದ್ಯವದ ಚಾಲನೆ ಅಥವಾ ವಿಸ್ತರಣೆಗೆ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಅದಕ್ಕಾಗಿ ಸಾಲಮಾಡುವುದು ಅಸಹಜವೇನಲ್ಲ. ಭಾರತದ ರೈತರು ಪಡೆದ ಸಾಲದ ಮೊತ್ತದಲ್ಲಿ ಸೇ. ಐವತ್ತಕ್ಕಿಂತ ಹೆಚ್ಚು ಭಾಗವನ್ನು ಉತ್ಪಾದನ ಕಾರ್ಯಗಳಿಗೆ ತೊಡಗಿಸದೆ ಸಂಸಾರದ ಖರ್ಚಿಗೋ ಇತರ ಅನುತ್ಪಾದಕ ಉದ್ದೇಶಗಳಿಗೋ ಉಪಯೋಗಿಸುತ್ತಾರೆ. ಇದರಿಂದ ಸಾಲ ಬಡ್ಡಿಗಳ ಹೊರೆ ಅತಿಯಾಗಿ ಅದನ್ನು ತೀರಿಸುವ ಸಾಮಥ್ರ್ಯ ಕಳೆದುಕೊಂಡಿದ್ದಾರೆ.

	ರೈತರ ಅನಾರ್ಥಿಕ ಹಿಡುವಳಿ, ಅವರಿಗೆ ಪೂರ್ಣಕಾಲದ ಉದ್ಯೋಗ ಇಲ್ಲದಿರುವುದು, ಉಪಕಸುಬುಗಳ ಕ್ಷೀಣಸ್ಥಿತಿ, ಉಚಿತ ವೈದ್ಯಸೌಕರ್ಯದ ಅಭಾವ, ಅನಿಶ್ಚಿತ ಮಳೆಯಿಂದಾಗಿ ವರಮಾನದ ಅಸ್ಥಿರತೆ, ಸಾಗುವಳಿ ಮಾಡಲು ಅಗತ್ಯವಾದ ಉಪಕರಣಗಳನ್ನೂ ಎತ್ತುಗಳನ್ನೂ ಕೊಳ್ಳುವ ಮತ್ತು ಕಂದಾಯ ಪಾವತಿಯ ಸಾಮಥ್ರ್ಯ ಇಲ್ಲದಿರುವುದು, ನ್ಯಾಯಾಲಯಗಳಲ್ಲಿ ವ್ಯಾಜ್ಯಗಳನ್ನು ಬೆಳೆಸುವ ಹವ್ಯಾಸ, ಮದುವೆಯೇ ಮುಂತಾದ ಸಂದರ್ಭಗಳಲ್ಲಿ ದುಂದು ವೆಚ್ಚ, ವಂಶಪಾರಂಪರ್ಯವಾಗಿ ಬಂದ ಸಾಲ ತೀರಿಸಲು ಮಾಡಬೇಕಾದ ಹೊಸ ಸಾಲ- ಇವು ರೈತನ ಋಣಭಾರ ಮುಖ್ಯಕಾರಣಗಳು. ಈ ಋಣಬಾಧೆಯಿಂದಾಗಿ ರೈತರು ಆರ್ಥಿಕ ಹಾಗೂ ಸಾಮಾಜಿಕ ಪತನವನ್ನು ಅನುಭವಿಸುತ್ತಾರೆ. ಅಸಲು ಮತ್ತು ಅಧಿಕ ಬಡ್ಡಿಯ ತೀರ್ವೆಗಾಗಿ ತಮ್ಮ ಫಸಲಿನಲ್ಲಿ ಬಹುಭಾಗವನ್ನು ಸಾಹುಕಾರರಿಗೆ ಕೊಟ್ಟು ಬಡತನದಲ್ಲಿ ತೊಳಲುತ್ತಾರೆ. ಸಾಲ ತೀರಿಸಲಾರದೆ ತಮ್ಮ ಭೂಮಿ ಹಾಗೂ ಇತರ ಆಸ್ತಿಗಳನ್ನು ಕಳೆದುಕೊಂಡವರು ಅಸಂಖ್ಯಾತ ಮಂದಿ ಉಂಟು. ಎಷ್ಟೋ ಸಂದರ್ಭಗಳಲ್ಲಿ ಸಾಲಗಾರರು ಸಾಹುಕಾರರ ಮನೆಯಲ್ಲಿ ಅಥವಾ ಜಮೀನುಗಳಲ್ಲಿ ಉಚಿತವಾಗಿ ಜೀತಮಾಡುವ ಪ್ರಸಂಗಗಳುಂಟು. ಇದು ಸಾಮಾಜಿಕ ವಿಷಮತೆಯನ್ನು ಉಲ್ಬಣಗೊಳಿಸುತ್ತದೆ.

	ಗ್ರಾಮೀಣ ಸಾಲದಲ್ಲಿ ಸಾಹುಕಾರರ ಪಾತ್ರ ಪ್ರಮುಖವಾದ್ದು. 1954ರ ಗ್ರಾಮೀಣ ಸಾಲ ಸರ್ವೇಕ್ಷಣೆಯ ವರದಿಯ ಪ್ರಕಾರ ಗ್ರಾಮೀಣ ಸಾಲದಲ್ಲಿ ಸೇ.ಸು. 70ರಷ್ಟನ್ನು ಸಾಹುಕಾರರೇ ಒದಗಿಸುತ್ತಿದ್ದರು. ಗ್ರಾಮಜೀವನದಲ್ಲಿ ಸಾಹುಕಾರರು ಶತಮಾನಗಳಿಂದ ತಮ್ಮ ಪ್ರಭಾವವನ್ನು ಬೀರುತ್ತ ಬಂದಿದ್ದಾರೆ. ಬ್ರಿಟಿಷರ ಆಳ್ವಿಕೆ ಬಲವಾಗುವುದಕ್ಕೆ ಮುನ್ನ ಗ್ರಾಮಪಂಚಾಯತಿಗಳು ಸಾಹುಕಾರರ ಮೇಲೆ ಒಂದು ರೀತಿಯ ನೈತಿಕ ಹಾಗೂ ಸಾಮಾಜಿಕ ನಿಯಂತ್ರಣ ಹೊಂದಿದ್ದುವು. ಸಾಲಗಾರ - ಸಾಹುಕಾರರ ವ್ಯವಹಾರಗಳೆಲ್ಲವೂ ಪಂಚಾಯತರಿಗೆ ಸಾಮಾನ್ಯವಾಗಿ ಗೊತ್ತಿರುತ್ತಿದ್ದದ್ದರಿಂದ ಯಾರಿಗೂ ವಂಚನೆ ಮಾಡುವುದು ಕಷ್ಟವಾಗಿತ್ತು. ಆದರೆ ಬ್ರಿಟಿಷರ ಆಳ್ವಿಕೆ ಆರಂಭವಾದ ಅನಂತರ ಸಿವಿಲ್ ನ್ಯಾಯಾಲಯಗಳು ಪಟ್ಟಣದಲ್ಲಿ ಏರ್ಪಟ್ಟ ಮೇಲೆ ಸಾಲಗಾರ - ಸಾಹುಕಾರವಿವಾದಗಳು ಕೋರ್ಟುಗಳಿಗೆ ಒಯ್ಯುಲ್ಪಡಲು ಆರಂಭವಾಯಿತು. ಇದರಿಂದ ಹಣ, ವಿದ್ಯೆ, ವ್ಯವಹಾರಜ್ಞಾನಗಳಲ್ಲಿ ಪ್ರಬಲವಾದ ಸಾಹುಕಾರ ಲೇವಾದೇವಿ ವಿವಾದಗಳಲ್ಲಿ ತನ್ನ ಮೇಲ್ಗೈಯನ್ನು ತೋರಿಸಲು ಸಾಧ್ಯವಾಯಿತು. ಸಾಲಪತ್ರಗಳಲ್ಲಿ ಸಾಲದ ಮೊಬಲಗು, ಬಡ್ಡಿ ಇತ್ಯಾದಿ ವಿಷಯಗಳ ನಮೂದನೆಯ ಬಗ್ಗೆ ವಂಚನೆಗಳಾಗುತ್ತಿದ್ದದ್ದುಂಟು. ಕೇವಲ ಲಿಖಿತಪತ್ರವನ್ನವಲಂಬಿಸಿ ಕೋರ್ಟುಗಳು ಕೊಡುತ್ತಿದ್ದ ತೀರ್ಪುಗಳು ರೈತನಿಗೆ ವಿರುದ್ಧವಾಗಿರುತ್ತಿದ್ದದ್ದುಂಟು.

	ಲೇವಾದೇವಿದಾರರ ಮೇಲೆ ಹತೋಟಿ ಇಟ್ಟುಕೊಳ್ಳಲು ಮತ್ತು ಅವರ ವ್ಯವಹಾರವನ್ನು ನಿಯಂತ್ರಿಸಲು ರಾಜ್ಯಸರ್ಕಾರಗಳು ಅನೇಕ ಕಾನೂನುಗಳನ್ನು ಜಾರಿಗೆ ತಂದಿವೆ. ಅವುಗಳ ಮುಖ್ಯಾಂಶಗಳಿವು: 1 ಲೇವಾದೇವಿದಾರರು ಲೈಸೆನ್ಸ್ ತೆಗೆದುಕೊಳ್ಳಬೇಕು. 2 ಲೇವಾದೇವಿ ವ್ಯವಹಾರದ ಬಗ್ಗೆ ಲೆಕ್ಕಪತ್ರಗಳನ್ನು ಕರಾರವಾಕ್ಕಾಗಿ ಇಡಬೇಕು. 3 ಸಾಲಗಾರರು ಅಸಲು ಅಥವಾ ಬಡ್ಡಿಯನ್ನು ಪಾವತಿ ಮಾಡಿದಾಗ ಅವರಿಗೆ ರಸೀತಿ ಕೊಡಬೇಕು. 4 ಸರ್ಕಾರ ಗೊತ್ತು ಮಾಡುವ ಬಡ್ಡಿಯ ದರಕ್ಕಿಂತ ಹೆಚ್ಚು ದರವನ್ನು ವಿಧಿಸಬಾರದು. 5 ಸಾಲಗಾರರಿಗೆ ಕಿರುಕುಳ ಕೊಡಕೂಡದು. 6 ಕೆಲವು ಬಗೆಯ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಕೂಡದು.

	ತೀವ್ರ ಋಣಬಾಧೆಗೆ ಒಳಗಾದ ರೈತರಿಗೆ ಪರಿಹಾರ ಒದಗಿಸಲೂ ಕ್ರಮಗಳನ್ನು ಕೈಗೊಳ್ಳಲಾಗಿದೆ. 1930ರ ಆರ್ಥಿಕ ದುಃಸ್ಥಿತಿಯ ಕಾಲದಲ್ಲಿ ಸಾಲಗಾರರ ಉತ್ಕಟ ಸಮಸ್ಯೆಯನ್ನು ಬಗೆಹರಿಸಲು ಪ್ರಾಂತೀಯ ಸರ್ಕಾರಗಳು ಕೆಲವು ಕ್ರಮಗಳನ್ನು ಕೈಗೊಂಡವು. ಅವುಗಳ ಪ್ರಕಾರ ಕೆಲವು ಪ್ರಾಂತ್ಯಗಳಲ್ಲಿ ಸಾಲದ ಮೊತ್ತವನ್ನು ಇಳಿಸಲು ಸಂಧಾನ ನಡೆಸುವುದಕ್ಕಾಗಿ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಯವರು ಸಾಲಗಾರರು ಪಡೆದಿರುವ ಸಾಲ ಮತ್ತು ಅವರು ಸಂದಾಯ ಮಾಡಿದ್ದ ಬಡ್ಡಿ ಇವುಗಳ ಪ್ರಮಾಣವನ್ನು ಪರಿಗಣಿಸಿ ಸಾಲಹಗಾರರಿಗೆ ಸಾಲದ ಮೊಬಲಗಿನಲ್ಲಿ ರಿಯಾಯತಿಯನ್ನು ಒದಗಿಸಲು ಪ್ರಯತ್ನಿಸಿದವು. ಕೆಲವು ಪ್ರಾಂತ್ಯಗಳಲ್ಲಿ ಕಡ್ಡಾಯವಾಗಿ ಸಾಲದ ಗಾತ್ರವನ್ನು ಇಳಿಸುವ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಸಾಲಗಾರರು ಕೊಡುವ ಒಟ್ಟು ಬಡ್ಡಿ ಸಾಲದ ಮೊತ್ತಕ್ಕೆ ಮೀರಿರಬಾರದೆಂಬ ನಿಯಮವನ್ನು ಕೆಲವು ಕಡೆ ಜಾರಿಗೆ ತರಲಾಯಿತು.

	ಹೀಗೆ ಸಾಹುಕಾರರ ಲೇವಾದೆವಿಯ ನಿಯಂತ್ರಣ ಹಾಗೂ ಋಣಬಾಧೆಯ ಪರಿಹಾರದ ಬಗ್ಗೆ ರಾಜ್ಯ ಸರ್ಕಾರಗಳು ಕಾನೂನುಗಳನ್ನು ಮಾಡಿದ್ದರೂ ಅವುಗಳ ಕಾರ್ಯಾನ್ವಯ ಯಶಸ್ವಿಯಾಗಿಲ್ಲ. ಈ ಬಗ್ಗೆ ಇರುವ ಕಾನೂನುಗಳು ಎಲ್ಲ ರಾಜ್ಯಗಳಲ್ಲೂ ಒಂದೇ ಸಮನಾಗಿಲ್ಲ. ಸರ್ಕಾರದ ಕಾನೂನುಗಳನ್ನು ನಿರ್ಲಕ್ಷಿಸುವ ಪ್ರಸಂಗಗಳೂ ಅಧಿಕ. ಲೇವಾದೇವಿ ಮಾಡಲು ರಹದಾರಿ ತೆಗೆದುಕೊಳ್ಳಬೇಕೆಂಬ ಕಟ್ಟಳೆ ಇದ್ದರೂ ಅದಿಲ್ಲದೆ ಸಾಲ ಕೊಡುತ್ತಿರುವವರ ಸಂಖ್ಯೆ ವಿಪರಿತವಾಗಿದೆ. ಬಡ್ಡಿಯ ದರದ ಬಗ್ಗೆ ಇರುವ ಕಾನೂನು ಕಾಗದದ ಮೇಲಿದೆ ಅಷ್ಟೆ. ಸಾಹುಕಾರರು ವಿಧಿಸುವ ಬಡ್ಡಿ ದರ ದುಬಾರಿಯಾಗಿಯೇ ಇದೆ. ಅಖಿಲ ಭಾರತಗ್ರಾಮೀಣ ಸಾಲ ಸರ್ವೇಕ್ಷಣೆಯ (1954) ಪ್ರಕಾರ ಸೇ. 25ಕ್ಕಿಂತ ಹೆಚ್ಚು ಬಡ್ಡಿ ತೆರುತ್ತಿರುವ ಸಾಲಗಾರರು ಒರಿಸ್ಸದಲ್ಲಿ ಸೇ. 70, ಬಂಗಾಳದಲ್ಲಿ ಸೇ. 40, ಉತ್ತರ ಪ್ರದೇಶದಲ್ಲಿ ಸೇ. 29 ಮತ್ತು ಬಿಹಾರದಲ್ಲಿ ಸೇ. 27 ಇದ್ದರು. ಇನ್ನು ಹಲವು ಕಡೆಗಳಲ್ಲಿ ಬಡ್ಡಿಯ ದರ ಸೇ. 50 ರಿಂದ 100ರ ವರೆಗೆ ಇದ್ದದ್ದುಂಟು.

	ಸಾಲ ನೀಡುವವರ ಬಗ್ಗೆ ಹಲವು ಕಾನೂನುಗಳಿದ್ದರೂ ಅವರ ಲೇವಾದೇವಿ ವ್ಯವಹಾರ ಅವ್ಯಾಹತವಾಗಿ ಯಶಸ್ವಿಯಾಗಿ ಮುಂದುವರಿಯುತ್ತಿರುವುದಕ್ಕೆ ಅನೇಕ ಕಾರಣಗಳುಂಟು. ಸರ್ಕಾರದ ಕಾನೂನುಗಳನ್ನು ಕಾರ್ಯಗತ ಮಾಡಲು ಸರಿಯಾದ ಆಡಳಿತ ವ್ಯವಸ್ಥೆ ಇದ್ದರೂ ನಿಷ್ಠಾಪೂರ್ಣ ಕಾರ್ಯಾನ್ವಯದ ಅಭಾವವಿದೆ. ರೈತರಿಗೆ ಅವಶ್ಯಕತೆ ತೋರಿದಾಗ ಸಕಾಲದಲ್ಲಿ ಹಣವನ್ನು ಒದಗಿಸಲು ಸಂಘ ಸಂಸ್ಥೆಗಳಿಲ್ಲ. ಆದ್ದರಿಂದ ಆವಶ್ಯಕತೆ ಒದಗಿದಾಗಲೆಲ್ಲ ಸಾಹುಕಾರರನ್ನೇ ಮೊರೆಹೋಗಬೇಕು. ಕಾಲಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವ ಜಾಣ್ಮೆ ಸಾಹುಕಾರರ ಯಶಸ್ಸಿಗೆ ಮುಖ್ಯ ಕಾರಣ. ಸಾಮಾನ್ಯವಾಗಿ ಯಾವ ಆಧಾರವಾಗಲಿ, ಭೋಗ್ಯವಾಗಲಿ ಇಲ್ಲದೆ ವೈಯಕ್ತಿಕ ಜವಾಬ್ದಾರಿಯ ಮೇಲೆ ಸಾಹುಕಾರರಿಗೆ ಸಾಲಗಾರರಿಗೆ ಅತಿ ಅಗತ್ಯವಾದ ಸಮಯದಲ್ಲಿ ಹಣವನ್ನು ಒದಗಿಸುತ್ತಾರೆ. ಸಹಕಾರಿ ಸಂಘಸಂಸ್ಥೆಗಳು ಆಸ್ತಿಯ ಆಧಾರವನ್ನವಲಂಬಿಸಿ ಅನೇಕ ಕಟ್ಟುಪಾಡುಗಳನ್ನಿಟ್ಟುಕೊಂಡಿದ್ದು ವಿಳಂಬ ಮಾಡುವುದರಿಂದ ಅವುಗಳ ಉಪಯೋಗ ರೈತರಿಗೆ ಸಕಾಲದಲ್ಲಿ ಆಗುವುದಿಲ್ಲ. ಸಾಹುಕಾರರು ಕೊಡುವ ಸಾಲಗಳಲ್ಲಿ ಸೇ. 80 ರಷ್ಟು ಸಾಲಗಳಿಗೆ ಯಾವ ಆಧಾರವೂ ಇರುವುದಿಲ್ಲವೆಂಬುದು ರಿಸರ್ವ್ ಬ್ಯಾಂಕಿನ ಸರ್ವೇಕ್ಷಣೆಯಿಂದ ವ್ಯಕ್ತವಾಗಿದೆ. ಹೀಗೆ ಲೇವಾದೇವಿಗಾರರು ಈಗಲೂ ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಬಲರಾಗಿದ್ದಾರೆ.

	ಈಚಿನ ವರ್ಷಗಳಲ್ಲಿ ಗ್ರಾಮಾಂತರ ಸಾಲ ವ್ಯವಸ್ಥೆಯಲ್ಲಿ ಸಹಕಾರಿ ಸಾಲದ ಸಂಘಗಳ ಪಾತ್ರ ಹೆಚ್ಚುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಗ್ರಾಮಾಂತರ ಕ್ಷೇತ್ರ ಪ್ರವೇಶ ಮಾಡುತ್ತಿವೆ. ಆದರೂ ಗ್ರಾಮೀಣ ಸಾಲದ ಮೊತ್ತದಲ್ಲಿ ಲೇವಾದೇವಿಗಾರರು ಒದಗಿಸುತ್ತಿರುವ ಹಣದ ಪ್ರಮಾಣ ಅರ್ಧಕ್ಕಿಂತ ಹೆಚ್ಚಾಗಿಯೇ ಇದೆ.							(ಬಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ